ಮಾರೀಚ
ಅಗಸ್ತ್ಯನ ಶಾಪದಿಂದ ರಾಕ್ಷಸನಾದವ, ಈತ ಸುಂದನೆಂಬ ರಾಕ್ಷಸನಿಂದ ಸುಕೇತು ಪುತ್ರಿಯಾದ ತಾಟಕೆ ಎಂಬ ಯಕ್ಷಸ್ತ್ರೀಯಲ್ಲಿ ಹುಟ್ಟಿದವ, ರಾವಣನ ಮಂತ್ರಿ ಸುಬಾಹು ಇವನ ತಮ್ಮ, ಒಮ್ಮೆ ವಿಶ್ವಾಮಿತ್ರ ಸಿದ್ಧಾಶ್ರಮದಲ್ಲಿ ಯಾಗ ಮಾಡುತ್ತಿದ್ದಾಗ ಆತನ ಯಜ್ಞವನ್ನು ಕೆಡಿಸಿ ಹೊಲಸುಮಾಡಿದ, ಆಗ ರಾಮ ಪ್ರಯೋಗಿಸಿದ ವಾಯವ್ಯಾಸ್ತ್ರದ ಪ್ರಭಾವದಿಂದ ಸಮುದ್ರದ ಆಚೆಗೆ ಹೋಗಿ ಬಿದ್ದ, ಈ ವೃತ್ತಾಂತ ರಾಮಾಯಣದ ಬಾಲಕಾಂಡದಲ್ಲಿ ಬಂದಿದೆ. ರಾವಣ ಸೀತೆಯನ್ನು ಅಪಹರಿಸುವ ಮೊದಲು ಈತನಲ್ಲಿಗೆ ಹೋಗಿ ಸಹಾಯ ಬೇಡಿದ, ಆಗ ಮಾರೀಚ ರಾವಣನಿಗೆ ಬುದ್ಧಿ ಹೇಳಿ ರಾಮನ ಪರಾಕ್ರಮ ಬಣ್ಣಿಸಿ ಆತನಿಂದ ದೂರವಿರುವುದು ಕ್ಷೇಮವೆಂದು ತಿಳಿಸಿದ. ಈ ಬುದ್ಧಿವಾದದಿಂದ ಲಂಕೆಗೆ ಮರಳಿದ ರಾವಣ ಶೂರ್ಪನಖಿಯ ಚೋದ್ಯದಿಂದ ಮತ್ತೆ ಮಾರೀಚನಲ್ಲಿಗೆ ಬಂದು ಸೀತೆಯ ಅಪಹರಣ ಕಾರ್ಯದಲ್ಲಿ ಸಹಾಯ ಮಾಡುವಂತೆ ಮಾರೀಚನನ್ನು ಒಪ್ಪಿಸಿದ, ಆಗ ಮಾರೀಚ ಮಾಯಾಮೃಗದ ರೂಪತಾಳಿ ಸೀತೆಯನ್ನು ಮರಳು ಮಾಡಿದ, ಕೊನೆಗೆ ಹಿಂಬಾಲಿಸಿ ಬಂದ ರಾಮನಿಂದ ಹತನಾದ, ಈ ವೃತ್ತಾಂತ ರಾಮಾಯಣದ ಅರಣ್ಯ ಕಾಂಡದಲ್ಲಿ ಬಂದಿದೆ.
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ